ನಿರ್ದೇಶಕ ಟಿ.ಎನ್ ನಾಗೇಶ್ ಅವರ ನಿರ್ದೇಶನ ಹಾಗೂ ಜಂಟಿ ನಿರ್ಮಾಣದ ಚಿತ್ರ ‘ಸಂಭವ’ ಕೆಂಗೇರಿಯ ಖಾಸಗಿ ಮನೆಯೊಂದರಲ್ಲಿ ಕ್ಲೈಮಾಕ್ಸ್ ಚಿತ್ರೀಕರಣ ಮುಗಿಸಿ ಮಾತುಗಳ ಚಿತ್ರೀಕರಣ ಸಂಪೂರ್ಣ ಗೊಳಿಸಿಕೊಂಡಿದೆ. ಇನ್ನೆನಿದ್ದರೂ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.
ನಿರ್ದೇಶಕ ಟಿ.ಎನ್ ನಾಗೇಶ್ ಅವರ ಪತ್ನಿ ತಾರಾ.ಆರ್ ಅವರು ರಮೇಶ್, ರವಿಕುಮಾರ್ ಅವರ ಜೊತೆ ಸೇರಿ ನಿರ್ಮಾಪಕರಾಗಿದ್ದಾರೆ. ತಂದೆ ಮಗನ ಬಾಂದವ್ಯದ ಜೊತೆಗೆ ಪ್ರೀತಿ, ಸಾಹಸ ಹಾಗೂ ಸೆಂಟಿಮೆಂಟ್ ಬೆರೆಸಿದ್ದಾರೆ. ನಾಗೇಶ್ ಈ ಹಿಂದೆ ಪಂಚಾಮೃತ, ಒಲವೇ ವಿಸ್ಮಯ ಮುಂತಾದ ಸಿನಿಮಾಗಳ ನಿರ್ದೇಶನ ಮಾಡಿದ್ದರು.
ಶ್ರೀ ಲಕ್ಷ್ಮಿನರಸಿಂಹ ಮೂವೀಸ್ ಅಡಿಯಲ್ಲಿ ‘ಸಂಭವ’ ಚಿತ್ರಕ್ಕೆ ೩೫ ದಿವಸಗಳ ಚಿತ್ರೀಕರಣ ಮಾಡಲಾಗಿದೆ. ವೀರ್ ಸಮರ್ಥ ಅವರು ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಬೆನಕರಾಜು ಈ ಚಿತ್ರದ ಛಾಯಾಗ್ರಾಹಕರು. ಬಸವರಾಜ್ ಅವರ ಸಂಕಲನ, ಕೌರವ ವೆಂಕಟೇಶ್ ಸಾಹಸ, ವಸಂತ್ ಕುಲಕರ್ಣಿ ಕಲಾ ನಿರ್ದೇಶನ ಒದಗಿಸಿದ್ದಾರೆ.
ಭುವನ್ ಈ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಪೂಜಾ, ಗಿರೀಶ್ ಕಾರ್ನಾಡ್, ಸುಚೇಂದ್ರ ಪ್ರಸಾದ್, ಪದ್ಮಜಾ ರಾವ್ ಮತ್ತಿತರರು ತಾರಾಗಣದಲ್ಲಿ ಇದ್ದಾರೆ.